1869-1944. ಕೆನಡಿಯನ್ ಸಾಹಿತ್ಯದ ಅತ್ಯಂತ ಪ್ರಸಿದ್ಧ ಹಾಸ್ಯ ಬರೆಹಗಾರ. ಅತಿ ಗಂಭೀರ ಕೃತಿಗಳಿಗೂ ಪ್ರಸಿದ್ಧ. ಇಂಗ್ಲೆಂಡ್‍ನ ಸೌತ್ ಆಂಪ್ಟನ್ ಹತ್ತಿರದ ಸ್ವಾನ್‍ಮೋರ್ ಎಂಬಲ್ಲಿ 1869 ಡಿಸೆಂಬರ್ 30 ರಂದು ಜನಿಸಿದ. ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರಗಳಲ್ಲಿ ಪ್ರಾಧ್ಯಾಪಕನಾಗಿ ಪ್ರಸಿದ್ಧನಾದ. 7 ವರ್ಷದವನಿದ್ದಾಗ ಅವನ ಕುಟುಂಬ ಆ್ಯಂಟರಿಯೋ ಎಂಬ ಪುಟ್ಟ ನಗರದ ತೋಟವೊಂದಕ್ಕೆ ವಲಸೆ ಹೋಯಿತು. 1891 ರಲ್ಲಿ ಟೊರಾಂಟೋ ವಿಶ್ವವಿದ್ಯಾಲಯದಲ್ಲಿ ಪದವೀಧರನಾದ. ಅನಂತರ ಶಿಕ್ಷಕನಾಗಿ ಸೇರಿದ. 10 ವರ್ಷದ ಅನಂತರ 1908 ರಲ್ಲಿ ಮ್ಯಾಕ್‍ಗಿಲ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕನಾ ಗಿದ್ದು 1936 ರವರೆಗೆ ಸೇವೆ ಸಲ್ಲಿಸಿ ನಿವೃತ್ತನಾದ.

ಅವನ ಪ್ರಬಂಧಗಳು ಹಾಗೂ ಹಾಸ್ಯ ಪ್ರಧಾನ ಕತೆಗಳು ಮೊದಲಿಗೆ ವೃತ್ತ ಪತ್ರಿಕೆಗಳಲ್ಲಿ ಹಾಗೂ ಇತರ ಸಾಪ್ತಾಹಿಕಗಳಲ್ಲಿ ಬೆಳಕು ಕಂಡವು. ಅವನ ಪ್ರಥಮ ಸಂಕಲನ ‘ಲಿಟರರಿ ಲ್ಯಾಪ್ಸಸ್’ 1910 ರಲ್ಲಿ ಪ್ರಕಟವಾಯಿತು. 1912 ರಲ್ಲಿ ಪ್ರಕಟವಾದ ‘ಸನ್‍ಶೈನ್ ಸ್ಕೆಚಸ್ ಆಫ್ ಎ ಲಿಟ್ಲ್ ಟೌನ್’ ಎಂಬ ಪುಸ್ತಕ ಒರಿಲಿಯಾ, ಆನ್‍ಟೆ ರಿಯೋ ನಗರಗಳ ಕುರಿತ ಅತ್ಯಂತ ಮನೋಜ್ಞವಾದ ದೃಶ್ಯಮಾಲಿಕೆಯಂಥ ವಿವರವುಳ್ಳದ್ದು.  ಇದು ಅವನ ಅತ್ಯಂತ ಮಹತ್ತ್ವದ ಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಅವನು ಬರೆದ 60 ಕ್ಕಿಂತ ಹೆಚ್ಚು ಕೃತಿಗಳಲ್ಲಿ ಸು. 35 ರಷ್ಟು ಹಾಸ್ಯ ಬರೆಹಗಳೇ ಆಗಿವೆ. ಮಿಕ್ಕವು ಆತ್ಮಕಥನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಹಾಗೂ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿವೆ.

ಅವನ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಚಾರ್ಲ್ ಡಿಕನ್ಸ್ (1933), ಮಾರ್ಕ್ ಟ್ವೈನ್ ಅವರ ಕುರಿತ ಚರಿತ್ರೆಗಳು, ಎಲಿಮೆಂಟ್ಸ್ ಆಫ್ ಪೊಲಿಟಿಕಲ್ ಸೈನ್ಸ್ (1906) ಪ್ರಾಕ್ಟಿಕಲ್ ಪೊಲಿಟಿಕಲ್ ಇಕಾನಮಿ (1910), ದ ಅನ್ ಸಾಲ್ವ್‍ಡ್ ರಿಡ್ಲ್ಸ್ ಆಫ್ ಸೋಷಿಯಲ್ ಜಸ್ಟೀಸ್ (1920), ಇಕನಾಮಿಕ್ ಪ್ರಾಸ್ಪರಿಟಿ ಇನ್ ದ ಬ್ರಿಟಿಷ್ ಎಂಪೈರ್ (1930) ಇತ್ಯಾದಿಗಳು ಪ್ರಮುಖವಾದವುಗಳು. ಅವನು ಟೊರಾಂಟೋದಲ್ಲಿ 1944 ಮಾರ್ಚ್ 28 ರಂದು ನಿಧನನಾದ. ಅವನ ಅಪೂರ್ಣ ಆತ್ಮಕಥನ “ದ ಬಾಯ್ ಐ ಲೆಫ್ಟ್ ಬಿಹೈಂಡ್ ಮಿ” 1946 ರಲ್ಲಿ ಅವನ ಮರಣಾ ನಂತರ ಪ್ರಕಟವಾಯಿತು. ಅವನ ಹಾಸ್ಯ ಕೃತಿಗಳು ಅತ್ಯಂತ ಆರೋಗ್ಯಕರವಾಗಿ ಜನ ಸಾಮಾನ್ಯರನ್ನು ಮುಟ್ಟುವ ಹಾಗೂ ಅವರನ್ನು ಗಂಭೀರವಾಗಿ ಚಿಂತನೆಗೆ ಹಚ್ಚುವ ಸಾಮಥ್ರ್ಯವುಳ್ಳವು ಎಂದು ಪ್ರಖ್ಯಾತವಾಗಿವೆ.
		
(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ